ಫೈಸೇಲಿಯ -
	ಸೀಲೆಂಟೆರೇಟ ವಿಭಾಗದ ಸೈಫನಾಫೊರ ಗಣಕ್ಕೆ ಸೇರಿದ ಅಕಶೇರುಕ. ಇದರ ವೈಜ್ಞಾನಿಕ ಹೆಸರು ಫೈಸೇಲಿಯ ಫೈಸೇಲಿಸ್ ಅಥವಾ ಫೈಸೇಲಿಯ ಪೆಲ್ಯಾಜಿಕ. ಇದನ್ನು ಸಾಮಾನ್ಯವಾಗಿ ಪೋರ್ಚುಗೀಸ್ ಮ್ಯಾನ್ ಆಫ್ ವಾರ್ ಎಂದು ಕರೆಯಲಾಗುತ್ತದೆ. ಜಲಚರಿಯಾದ ಇದು ಪ್ರಪಂಚದ ಎಲ್ಲ ಸಾಗರಗಳಲ್ಲೂ ಕಾಣಬರುತ್ತದೆ.

	ಫೈಸೇಲಿಯ ನಿವಹಯುಕ್ತ ಅಂಬಲಿಮೀನು (ಜೆಲಿಫಿಶ್). ನೋಡಲು ಏಕಜೀವಿಯಂತೆ ಕಾಣುತ್ತದಾದರೂ ಇದು ವಾಸ್ತವವಾಗಿ ಅನೇಕ ಬಿಡಿ ಪಾಲಿಪ್ ಜೀವಿಗಳಿಂದ ರಚಿತವಾದ ನಿವಹ (ಕಾಲನಿ). ಇದರಲ್ಲಿ ಹಾರಿಜವಾಗಿ ಸುಮಾರು 30 ಸೆಂಮೀ. ಉದ್ದ ಬೆಳೆಯುವ ಮೂಲ ಪಾಲಿಪ್ ಉಂಟು. ಇದರ ತಳಭಾಗದಲ್ಲಿ ಉದ್ದಕ್ಕೂ ಚಾಚಿದಂತೆ ಪಾಲಿಪ್ ಗುಚ್ಛಗಳ ಎರಡು ಪ್ರಧಾನ ಸಾಲುಗಳುಂಟು. ಇವುಗಳಿಂದ ಕೆಳಗೆ ತೂಗುಬಿದ್ದಿರುವಂತೆ ಜೋಡಣೆಗೊಂಡಿರುವ ದ್ವಿತೀಯಕ ಹಾಗೂ ತೃತೀಯಕ ಪಾಲಿಪ್ ಗುಚ್ಛಗಳು ಮೂಡಿರುವುವು. ಈ ಪಾಲಿಪ್ ಗುಚ್ಛಗಳಲ್ಲಿ ಕೆಲವು ಪಾಲಿಪ್‍ಗಳು ಆಹಾರ ಸೇವನೆಗೂ (ಗ್ಯಾಸ್ಟ್ರೊಜೂಆಯಿಡ್ಸ್), ಇನ್ನು ಕೆಲವು ಪ್ರಜನನಕ್ರಿಯೆಗೂ (ಗೋನೊಜೂಆಯಿಡ್ಸ್) ಮತ್ತೆ ಕೆಲವು ಆಹಾರವನ್ನು ಸೆರೆಹಿಡಿಯುವುದಕ್ಕೂ (ಡ್ಯಾಕ್ಟೈಲೊಜೂಆಯಿಡ್ಸ್) ಮೀಸಲಾಗಿವೆ. ಮೂಲ ಪಾಲಿಪ್ಪಿನ ಮೇಲ್ಭಾಗದಲ್ಲಿ ಅದರ ಉದ್ಧಕ್ಕೂ ಹರಡಿರುವಂತೆ ಒಂದೇ ಒಂದು ಅನಿಲ ಸಂಚಿಯುಂಟು (ನ್ಯೂಮ್ಯಾಟೊಫೋರ್) ಇದು 20-30 ಸೆಂಮೀ ಉದ್ದವೂ ಸು. 10 ಸೆಂಮೀ ಅಗಲವೂ ಇರುವ ಚೀಲ. ಇದರ ತಳದಲ್ಲಿರುವ ಒಂದು ಗ್ರಂಥಿಯಿಂದ ನೈಟ್ರೊಜನ್, ಆಕ್ಸಿಜನ್ ಹಾಗೂ ಆರ್ಗಾನ್ ಅನಿಲಗಳ ಮಿಶ್ರಣ ಉತ್ಪತ್ತಿಯಾಗಿ ಚೀಲದ ತುಂಬ ತುಂಬಿಕೊಂಡು ಪ್ರಾಣಿ ನೀರಿನ ಮೇಲೆ ತೇಲಲು ಸಹಾಯಕವಾಗಿದೆ. ಈ ಸಂಚಿ ಒಂದು ತೆರನ ಹಾಯಿಯಂತೆ ಕೆಲಸಮಾಡುತ್ತದೆ. ಫೈಸೇಲಿಯದ ಚಲನೆಗೆ ಇದೊಂದೇ ವಿಧಾನ. ಉಳಿದಂತೆ ಈ ಪ್ರಾಣಿಯಲ್ಲಿ ಯಾವುದೇ ಚಲನಾಂಗಗಳಿಲ್ಲ.		*

	ಡ್ಯಾಕ್ಟೈಲೊಜೂಆಯಿಡ್ಡುಗಳು ಸ್ಪರ್ಶಕಾಂಗಗಳಾಗಿಯೂ ಕೆಲಸಮಾಡುವುವು. ಇವು ತುಂಬ ಉದ್ದವಾದ ಚಾಟಿಯಂತಿವೆ, ಇವುಗಳ ಉದ್ದ ಸುಮಾರು 50ಮೀ. ಇರುವುದೂ ಉಂಟು. ಇವುಗಳ ಮೇಲೆಲ್ಲ ಅಲ್ಲಲ್ಲಿ ನೆಮಾಟೊಸಿಸ್ಟುಗಳೆಂಬ ಮುಳ್ಳುಗಳುಂಟು.

	ಇವು ತುಂಬ ವಿಷಪೂರಿತ. ಇವುಗಳ ಕುಟುಕಿನಿಂದ ಮಾನವನಲ್ಲಿ ತೀವ್ರತರವಾದ ಗಂದೆಗಳೆದ್ದು ಇಡೀ ದೇಹ ಒಗ್ಗದಿಕೆಗೆ ಒಳಗಾಗುವುದು. ಕೆಲವೊಮ್ಮೆ ಸಾವು ಸಂಭವಿಸುವುದೂ ಉಂಟು.

	ಸಾಗರಗಳ ಮೀನುಗಳೇ ಫೈಸೇಲಿಯದ ಪ್ರಧಾನ ಆಹಾರ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ